ನೆಸ್ಲರನ ಅಭಿಕರ್ಮಕ  -
	0.5N ಕ್ಷಾರೀಯ ಪೊಟ್ಯಾಸಿಯಮ್ ಮಕ್ರ್ಯೂರಿಕ್ ಅಯೊಡೈಡ್ [ಏ2ಊgI4] (ನೆಸ್ಲರ್ಸ್ ರೀ ಏಜೆಂಟ್). ನೀರಿನಲ್ಲಿ ವಿಲೀನವಾಗಿರುವ ಅಮೊನಿಯದ ಅಂಶವನ್ನು ಕಂಡುಹಿಡಿಯಲು ಮೊದಲ ಬಾರಿಗೆ ಇದನ್ನು ನೆಸ್ಲರ್ ಉಪಯೋಗಿಸಿದ (1868). ಅಮೊನಿಯದೊಂದಿಗೆ ವರ್ತಿಸಿದಾಗ ಕಂದು ಬಣ್ಣದ ವಸ್ತು ಉತ್ಪತ್ತಿಯಾಗುತ್ತದೆ. ಕ್ರಿಯಾಮಿಶ್ರಣಕ್ಕೆ ಹೆಚ್ಚು ಅಭಿಕರ್ಮಕವನ್ನು ಬೆರೆಸಿದಾಗ ಅದು ವಿಲೀನವಾಗುತ್ತದೆ ಮತ್ತು ದ್ರಾವಣ ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ.

ಚಿತ್ರ-1

ಅಭಿಕರ್ಮಕದ ತಯಾರಿಕೆ: 115 ಗ್ರಾಮ್ ಮಕ್ರ್ಯೂರಿಕ್ ಕ್ಲೋರೈಡ್ ಮತ್ತು 80 ಗ್ರಾಮ್ ಪೊಟ್ಯಾಸಿಯಮ್ ಅಯೊಡೈಡುಗಳನ್ನು ಸಾಕಷ್ಟು ನೀರಿನಲ್ಲಿ ವಿಲೀನಿಸಿ ಆಸವಿತ ನೀರನ್ನು ಸೇರಿಸಿ ದ್ರಾವಣದ ಅಳತೆಯನ್ನು 500 ಮಿಲೀಗೆ ಏರಿಸಿ ಈ ದ್ರಾವಣಕ್ಕೆ 500 ಮಿಲೀ 6ಓ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣವನ್ನು ಬೆರೆಸಿದಾಗ ದೊರೆಯುವ ದ್ರಾವಣವೇ ನೆಸ್ಲರನ ಅಭಿಕರ್ಮಕ, ಹೆಚ್ಚು ಕಾಲ ಇಟ್ಟಲ್ಲಿ ಇದರ ತಳದಲ್ಲಿ ಒತ್ತರ ಶೇಖರವಾಗುತ್ತದೆ. ಆಗ ಮೇಲಿನ ದ್ರಾವಣವನ್ನು ಬಸಿದುಕೊಂಡು ಅಭಿಕರ್ಮಕವನ್ನು ಒತ್ತರದಿಂದ ಬೇರ್ಪಡಿಸಬಹುದು. ಅಭಕರ್ಮಕವನ್ನು ಕತ್ತಲೆಯಲ್ಲಿ ಇಟ್ಟಿರಬೇಕು. ಸೂಕ್ಷ್ಮವಾದ ಅಮೊನಿಯ ಅಂಶವನ್ನು ಕಂಡುಹಿಡಿಯಲು ಉಪಯೋಗಿಸುವ ಅಭಿಕರ್ಮಕವನ್ನು ಅಮೊನಿಯದಿಂದ ಹೊರತಾದ ಆಸವಿತ ನೀರಿನಿಂದ ತಯಾರಿಸಬೇಕು.

ಉಪಯೋಗಗಳು: ಅಭಿಕರ್ಮಕವನ್ನು ಅತ್ಯಲ್ಪ ಮೊತ್ತದ ಅಮೊನಿಯ ಅಂಶವನ್ನು ಕಂಡುಹಿಡಿಯಲು ಉಪಯೋಗಿಸುತ್ತಾರೆ. ಆದ್ದರಿಂದ ಇದನ್ನು ಪ್ರೋಟೀನುಗಳು, ಯೂರಿಯ ಅಥವಾ ಯಾವುದೇ ಪ್ರೋಟೀನ್ ಅಮೊನಿಯಕ್ಕೆ ಪೂರ್ತಿಯಾಗಿ ಪರಿವರ್ತಿಸಲ್ಪಡುವಂತಿದ್ದಲ್ಲಿ ಆ ವಸ್ತುವಿನ ಅಂಶವನ್ನು ಕಂಡುಹಿಡಿಯಲು ಉಪಯೋಗಿಸಬಹುದು. ಯೂರಿಯೆಸ್ ಕಿಣ್ವ ಕ್ರಿಯೆಯನ್ನು ತಿಳಿಯಲು ಇದು ಉತ್ತಮ ಅಭಿಕರ್ಮಕವೆಂದು ಪರಿಗಣಿಸಲ್ಪಟ್ಟಿದೆ.				 (ಟಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ